ಪೀಚ್‍ಮರ
ರೋಸೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ.  ಬಾದಾಮಿ, ಸಕ್ಕರೆ ಬಾದಾಮಿ (ಏಪ್ರಿಕಾಟ್) ಪ್ಲಮ್, ಚೆರಿ ಮರಗಳ ಹತ್ತಿರ ಸಂಬಂಧಿ.  ಇವೆಲ್ಲವೂ ಪ್ರೂನಸ್ ಎಂಬ ಒಂದೇ ಜಾತಿಗೆ ಸೇರಿವೆ.  ಅವುಗಳಂತೆಯೇ ಇದೂ ಕೂಡ ತನ್ನ ರುಚಿಯಾದ ಹಣ್ಣುಗಳಿಂದಾಗಿ ವಾಣಿಜ್ಯ ಪ್ರಮುಖ್ಯತೆಯನ್ನು ಪಡೆದಿದೆ.  ಇದರ ಶಾಸ್ತ್ರೀಯ ಹೆಸರು ಪ್ರೂನಸ್ ಪರ್ಸಿಕ.  ಚೀನ ಇದರ ತವರು ಎನ್ನಲಾಗಿದೆ.  ಅಲ್ಲಿ ಕಾಡುಗಿಡವಾಗಿ ಬೆಳೆಯುತ್ತಿರುವ ಪ್ರೂನಸ್ ಡೇವಡಿಯಾನ ಎಂಬ ಸಸ್ಯದಿಂದ ಇದರ ಉಗಮವಾಗಿದೆ ಎಂದು ತಜ್ಞರ ಅಭಿಪ್ರಾಯ.  ಚೀನದಿಂದ ಪರ್ಷಿಯಾಕ್ಕೆ ಸಾಗಿ ಅನಂತರ ಯೂರೋಪ್, ಅಮೆರಿಕಗಳಿಗೆ ಕಾಲಿಟ್ಟ ಪೀಚ್ ಮರ ಬಲು ಬೇಗ ಜನಪ್ರಿಯವಾಯಿತು. 

ಪೀಚ್ ಕೃಷಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಬಲು ಪ್ರಸಿದ್ಧ.  ಸೇಬು ಬಿಟ್ಟರೆ ಪೀಚ್ ಮರಕ್ಕೆ ಇಲ್ಲಿ ಎರಡನೆಯ ಸ್ಥಾನ.  ಯೂರೋಪಿನಲ್ಲಿ ಇಟಲಿ, ಫ್ರಾನ್ಸ್, ಸ್ಪೇನ್‍ಗಳು, ಏಷ್ಯದಲ್ಲಿ ಚೀನ, ಜಪಾನ್‍ಗಳು ದಕ್ಷಿಣ ಅಮೆರಿಕದಲ್ಲಿ ಅರ್ಜಂಟೀನ, ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕವೂ ಪೀಚ್ ಕೃಷಿಗೆ ಹೆಸರಾಂತಿವೆ.  ಆಸ್ಟ್ರೇಲಿಯದಲ್ಲೂ ಗಣನೀಯ ಮೊತ್ತದಲ್ಲಿ ಪೀಚ್ ಮರವನ್ನು ಬೆಳೆಸಲಾಗುತ್ತಿದೆ.  ಭಾರತದಲ್ಲಿ ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರ ಪ್ರದೇಶಗಳು ಬೆಟ್ಟಗಳ ತಪ್ಪಲುಗಳು ಹಾಗೂ ದಕ್ಷಿಣದ ನೀಲಗಿರಿ ಬೆಟ್ಟಗಳು ಪೀಚ್ ಬೇಸಾಯಕ್ಕೆ ಪ್ರಸಿದ್ಧವಾಗಿವೆ.   ಈ ಎಲ್ಲ ರಾಜ್ಯಗಳೂ ಸೇರಿ ಒಟ್ಟು 2000 ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಪೀಚ್ ಮರವನ್ನು ಬೆಳೆಸಲಾಗುತ್ತಿದೆ.  ಪೀಚ್‍ನಲ್ಲೂ ಪರ್ಸಿಕ (ಸಾಮಾನ್ಯ ಪೀಚ್), ನೆಕ್ಟರೈನ (ನೆಕ್ಟರೈನ್ ಪೀಚ್) ಮತ್ತು ಕಂಪ್ರೆಸ್ (ಚಪ್ಪಟೆ ಪೀಚ್) ಎಂಬ ಮೂರು ಪ್ರಧಾನ ಬಗೆಗಳುಂಟು.  ಒಳಗಿನ ಬಿತ್ತ ತಿರುಳಿಗೆ ಅಂಟಿದೆಯೊ ಇಲ್ಲವೋ ಎಂಬುವುದರ ಆಧಾರದ ಮೇಲೆ ಇವನ್ನು ಮತ್ತೆ ಎರಡು ವಿಧಗಳನ್ನಾಗಿ ವಿಂಗಡಿಸಿದೆ.
ಭಾರತದಲ್ಲಿ ಬೆಳೆಯುವ ಪೀಚ್‍ಗಳಲ್ಲಿ ಮುಖ್ಯ ಬಗೆಗಳಿವು: ಉತ್ತರ ಭಾರತದಲ್ಲಿ ಕಂಡುಬರುವ ಅಲೆಕ್ಸಾಂಡರ್, ಪೆರೆಗ್ರೈನ್, ಅರ್ಲಿ ರಿವರ್ಸ್, ಡ್ಯೂಕ್ ಆಫ್ ಯಾರ್ಕ್, ಬ್ಯಾಬ್‍ಕಾಕ್, ಎಲ್ಬರ್ಟ್, ಹನಿ, ಜೆ.ಎಚ್. ಹೇಲ್, ಸಿ.ಒ. ಸ್ಮಿತ್, ಹಾಲ್ಬರ್ಟ್ ಜಯಂಟ್, ತೋತಾಪರಿ ಹಾಗೂ ನೀಲಗಿರಿ ಬೆಟ್ಟಗಳಲ್ಲಿ ಬೆಳೆಯಲಾಗುವ ಕಿಲಿಕರಂಕಿ ಮತ್ತು ಷಾಂಗಾಯ್ ಸೀಡ್‍ಲಿಂಗ್.
ಕೃಷಿ: ಪೀಚ್ ಸಮಶೀತೋಷ್ಣವಲಯದ ಸಸ್ಯವಾದರೂ ಇದೇ ವಲಯದಲ್ಲಿ ಬೆಳೆಯುವ ಇತರ ಸಸ್ಯಗಳಿಗೆ ಹೋಲಿಸಿದರೆ ಇದಕ್ಕೆ ಹೆಚ್ಚು ಚಳಿ ಬೇಕಾಗದು.  ಆದ್ದರಿಂದ ಇದನ್ನು ಮೈದಾನ ಸೀಮೆಗಳಲ್ಲೂ, ಬೆಟ್ಟ ಗುಡ್ಡ ಪ್ರದೇಶಗಳಲ್ಲೂ ಬೆಳೆಯಬಹುದು.  ಭಾರತದಲ್ಲಿ ಹಿಮಾಲಯದ 850-1,700 ಮೀ. ಎತ್ತರದ ಪ್ರದೇಶಗಳಲ್ಲೂ ನೀಲಗಿರಿಗಳ 1300-1750 ಮೀ ಎತ್ತರದ ಸೀಮೆಗಳಲ್ಲೂ ಇದರ ಕೃಷಿ ಇದೆ.  ಪೀಚ್ ಹಲವಾರು ತೆರನ ಮಣ್ಣುಗಳಲ್ಲಿ ಬೆಳೆಯಬಲ್ಲುದಾದರೂ ಸರಾಗವಾಗಿ ನೀರು ಬಸಿದು ಹೋಗುವಂಥ ಮರಳು ಮಿಶ್ರಿತ ಗೋಡುಮಣ್ಣು ಇದರ ಬೇಸಾಯಕ್ಕೆ ಅತ್ಯುತ್ತಮ.  ಮಣ್ಣಿನಲ್ಲಿ ಸಾರಜನಕದ ಮೊತ್ತ ಹೆಚ್ಚಾಗಿದ್ದರೆ ಒಳ್ಳೆಯದು.

ವೃದ್ಧಿ : ಭಾರತದಲ್ಲಿ ಪೀಚ್ ಮರವನ್ನು ಬಡಿಂಗ್ ವಿಧಾನದಿಂದ ವೃದ್ಧಿಸಲಾಗುತ್ತದೆ.  ಮೊದಲಿಗೆ ಚೆನ್ನಾಗಿ ಮಾಗಿದ ಫಲಗಳಿಂದ ಬೀಜಗಳನ್ನು ಬೇರ್ಪಡಿಸಿ, ಚೆನ್ನಾಗಿ ತೊಳೆದು ಬಿತ್ತಲಾಗುತ್ತದೆ.  ಒಣಗಿಸಿ ಸಂಸ್ಕರಿಸಿದರೆ ಬೀಜಗಳನ್ನು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಸಂಗ್ರಹಿಸಿಡಬಹುದು.

ಪೀಚ್ ಬೀಜಗಳು ಮೊಳೆಯುವುದು ಬಲು ನಿಧಾನ, ಬೇಗ ಮೊಳೆಯುವಂತೆ ಮಾಡಲು ಕೆಲವೊಮ್ಮೆ ಬೀಜದ ಹೊರಹೊದಿಕೆಯನ್ನು ಸೀಳುವುದುಂಟು.  ಬೀಜದಿಂದ ಪಡೆದ ಸಸಿಗಳು ಸುಮಾರು 20 ತಿಂಗಳ ವಯಸ್ಸಿನವಾದಾಗ ಇದಕ್ಕೆ ಬಲಿತ ಪೀಚ್ ರೆಂಬೆಗಳನ್ನು ಕಸಿ ಮಾಡಲಾಗುತ್ತದೆ.  ಕೆಲವೆಡೆ ಪ್ಲಮ್ ಸಸಿಗಳನ್ನೂ ಕಹಿ ಬಾದಾಮಿ ಗಿಡಗಳ ಸಸಿಗಳನ್ನೂ ತಾಳು ಸಸಿಗಳನ್ನಾಗಿ ಬಳಸುವುದಿದೆ.  ಅಮೆರಿಕದಲ್ಲಿ ಸಕ್ಕರೆ ಬಾದಾಮಿ (ಏಪ್ರಿಕಾಟ್) ಸಸಿಗಳನ್ನೂ ಹೀಗೆ ಉಪಯೋಗಿಸಲಾಗಿದೆ.  
ಕಸಿ ಮಾಡಿದ ಸಸಿಗಳನ್ನು ಬೇರೆಡೆಗೆ ಸಾಗಿಸಿ 5-7 ಮೀ. ಅಂತರಕ್ಕೊಂದರಂತೆ ನೆಡಲಾಗುತ್ತದೆ.  ಸಸಿಗಳು ಗೆದ್ದಲಿನ ಹಾವಳಿಗೆ ತುತ್ತಾಗುವ ಸಂಭವ ಇದೆಯಾಗಿ ನೆಟ್ಟ ತರುಣದಲ್ಲಿ ಆಲ್ಡ್ರೆನ್ ಮಿಶ್ರಿತ ನೀರನ್ನು ಇವಕ್ಕೆ ಹಾಯಿಸಲಾಗುತ್ತದೆ.  ಪೀಚ್ ತೋಟಗಳಲ್ಲಿ ಪದೇ ಪದೇ ಕಳೆ ಕೀಳುವುದು, ಮಣ್ಣು ಸಡಿಲಿಸುವುದು ಮುಂತಾಗಿ ಮಾಡುತ್ತಲೇ ಇರಬೇಕು.  ಹಸುರು ಎಲೆ ಗೊಬ್ಬರವನ್ನು, ಮಣ್ಣಿನ ಗುಣ ಹಾಗೂ ಗಿಡಗಳ ವಯಸ್ಸುಗಳನ್ನು ಅವಲಂಬಿಸಿ ರಸಗೊಬ್ಬರವನ್ನು ಕೊಡಲಾಗುತ್ತದೆ.  ಬೇಸಿಗೆಯಲ್ಲೂ ಗಿಡಗಳಲ್ಲಿ ಫಲ ಕಚ್ಚಿದಾಗಲೂ ಯಥೇಚ್ಚವಾಗಿ ನೀರು ಕೊಡುವುದಿದೆ.  ಬೆಳೆಯ ಪೀಚ್ ತೋಟಗಳಲ್ಲಿ ಕೆಲವು ಮರಗಳು ಸತ್ತು ಹೋದರೆ, ಬದಲಿಗೆ ಎಳೆಯ ಗಿಡಗಳನ್ನು ನೆಡುವ ಕ್ರಮ ಇದೆ.  ಇಂಥ ಗಿಡಗಳ ಬೆಳವಣಿಗೆ ಕುಂಠಿತವಾಗಿರುತ್ತದೆ.  ಹಳೆಯ ಮರಗಳ ಬೇರುಗಳಿಂದ ಉತ್ಪತ್ತಿಯಾಗುವ ಅಮಿಗ್ಡಲೆನ್ ಎಂಬ ಗ್ಲೂಕೋಸೈಡ್ ವಸ್ತುವನ್ನು ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳು ಕೆಲಬಗೆಯ ವಿಷ ವಸ್ತುಗಳಾಗಿ ಪರಿವರ್ತಿಸುವುದರಿಂದ ಹೀಗಾಗುತ್ತದೆ.
ಕೆಲವನ್ನುಳಿದು ಬಹುಪಾಲು ಪೀಚ್ ಬಗೆಗಳು ಸ್ವಪರಾಗ ಸ್ಪರ್ಶದಿಂದಲೇ ಕಾಯಿ ಕಚ್ಚುತ್ತವೆ.  ಆದರೂ, ವಿಭಿನ್ನ ಬಗೆಯ ಪೀಚ್ ಮರಗಳನ್ನು ನೆಡುವುದರಿಂದಲೂ ತೋಟದಲ್ಲಿ ಜೇನುಗೂಡುಗಳನ್ನು ಇಡುವುದರಿಂದಲೂ ಅನ್ಯ ಪರಾಗ ಸ್ಪರ್ಶ ನಡೆಯುವಂತೆ ಮಾಡಬಹುದು.  ಮರಗಳು ಚೆನ್ನಾಗಿ ಬೆಳೆಯುವ ಸಲುವಾಗಿ, ಆದರೆ, ಹೆಚ್ಚು ಎತ್ತರಕ್ಕೆ ಬೆಳೆಯದಂತೆ ಇರಿಸುವ ಸಲುವಾಗಿ ಹಣ್ಣುಗಳ ಗಾತ್ರ ಹೆಚ್ಚುವಂತೆ ಮಾಡುವ ಸಲುವಾಗಿ ಪೀಚ್ ಮರಗಳ ರೆಂಬೆಗಳನ್ನು ವರ್ಷಕ್ಕೊಮ್ಮೆ ಕತ್ತರಿಸಲಾಗುತ್ತದೆ.  
ಪೀಚ್ ಮರಗಳ ರೋಗಗಳು ಹಾಗೂ ಪಿಡುಗುಗಳು: ಪೀಚ್ ಮರಗಳಿಗೆ ಹಲವಾರು ತೆರನ ಬೂಸ್ಟು ರೋಗಗಳು ತಗಲುತ್ತವೆ.  ಇವುಗಳಲ್ಲಿ ಮುಖ್ಯವಾದುವು ಇಂತಿವೆ: 
1.  ಟ್ಯಾಫ್ರಿನ ಡಿಫಾರ್ಮೆನ್ಸ್ ಎಂಬ ಬೂಸ್ಟಿನಿಂದ ಬರುವ ಎಲೆ ಮುರುಟು ರೋಗ-ಬೆಟ್ಟ ಸೀಮೆಗಳಲ್ಲಿ ಬೆಳೆಯುವ ಪೀಚ್‍ಮರಗಳಿಗೆ ಇದು ತಗುಲುವ ಸಂಭವ ಹೆಚ್ಚು.  ರೋಗ ಪೀಡಿತ ಮರದ ಬೆಳವಣಿಗೆ ಕುಂಠಿತಗೊಳ್ಳುತ್ತದೆ: ಎಲೆಗಳು ಮುರುಟಿಕೊಳ್ಳುವುವು.  ಇದರಿಂದ ಸಹಜವಾಗಿಯೇ ಫಲಗಳ ಇಳುವರಿ ಕಡಿಮೆಯಾಗುತ್ತದೆ.  ಸುಣ್ಣ-ಗಂಧಕಗಳ ಮಿಶ್ರಣ, ಬೋರ್ಡೊ ಆಥವಾ ಬರ್ಗಂಡಿ ಮಿಶ್ರಣಗಳ ಬಳಕೆಯಿಂದ, ರೋಗಪೀಡಿತ ರೆಂಬೆಗಳನ್ನು ತೆಗೆದುಹಾಕುವುದರಿಂದ ಈ ರೋಗವನ್ನು ತಡೆಯಲಾಗುತ್ತದೆ.
2. ಸ್ಪೀರೊತೀಕ ವ್ಯಾನೋಸ ಎಂಬುದರಿಂದ ಬರುವ ಮಿಲ್‍ಡ್ಯೂ ರೋಗ ಪೀಚ್ ಹಣ್ಣುಗಳನ್ನು ಎಲೆಗಳನ್ನು ಇದು ಬಾಧಿಸುತ್ತದೆ.  ಗಂಧಕ ಇಲ್ಲವೆ ಗಂಧಕ ಮತ್ತು ಸುಣ್ಣಗಳ ಮಿಶ್ರಣದ ಸಿಂಪಡಿಕೆಯಿಂದ ಈ ರೋಗವನ್ನು ನಿವಾರಿಸಬಹುದು.
3.  ವೈರಸ್ ದಾಳಿಯಿಂದ ಉಂಟಾಗುವ ಎಲೆರೋಗ-ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿನ ಪೀಚ್ ತೋಟಗಳಲ್ಲಿ ಕಾಣಬರುತ್ತದೆ.  ರೋಗಪೀಡಿತ ಎಲೆಗಳ ಅಲಗು ರಂಧ್ರಗಳಿಂದ ತುಂಬಿಹೋಗುತ್ತದೆ.
ಇವಲ್ಲದೆ ಕ್ರೋನಿಯೊತೀಸಿಯಮ್ ಕೊಮ್ಯಾಟೊಸ್ಪೋರಮ್‍ನಿಂದ ಉಂಟಾಗುವ ಕಪ್ಪು ಕಾಂಡರೋಗ, ಪಕ್ಸೀನಿಯ ಫ್ರೂನಿಸ್ಪೈನೋಸೀಯಿಂದ ಉಂಟಾಗುವ ಕಾಡಿಗೆ ರೋಗ ಕ್ಲಾಸ್ಟರೊಸ್ಪೋರಿಯಮ್ ಕಾರ್ಪೊಫೈಲಮ್ ಎಂಬುದರಿಂದ ಬರುವ ಗಮ್‍ಸ್ಪಾಟ್ ರೋಗ, ಸೂಡೊಮೋನಾಸಿನಿಂದ ಉಂಟಾಗುವ ಗಮೋಸಿಸ್ ರೋಗ-ಇವು ಪೀಚ್ ಮರಗಳನ್ನು ಬಾಧಿಸುವ ಇನ್ನಿತರ ರೋಗಗಳು.
ಪೀಚನ್ನು ಪೀಡುಸುವ ಕೀಟ ಪಿಡುಗುಗಳಲ್ಲಿ ಅತಿ ಮುಖ್ಯವಾದ್ದೆಂದರೆ, ಬ್ರಾಕಿಕಾಡಸ್, ಹೆಲಿಕ್ರೈಸಿಯೈ ಎಂಬ ಏಫಿಡ್. ಇದರಿಂದ ನರಳುವ ಮರಗಳ ಎಲೆಗಳು ಮುರುಟಿಕೊಳ್ಳುವುವು.  ನಿಕೊಟಿನ್ ಸಲ್ಫೇಟನ್ನೋ ಅಥವಾ ಡೈಯಾಜಿನಾನ್ ಎಂಬ ಔಷಧಿಯನ್ನೋ ಸಿಂಪಡಿಸುವುದರಿಂದ ಈ ಕೀಟವನ್ನು ನಿಯಂತ್ರಿಸಬಹುದು.  ಹಯಾಲೋಟೇರಸ್ ಫ್ರೂನಿ, ಮೈಜಸ್ ಪರ್ಸಿಕೀ, ಟೀರೊಕ್ಲೋರಸ್ ಪರ್ಸಿಕೀ ಎಂಬುವು ಇನ್ನಿತರ ಅಪಾಯಕಾರಿ ಏಫಿಡ್ಡುಗಳು.  ರೋಸಿನ್ ಮತ್ತು ತಂಬಾಕುಗಳ ಮಿಶ್ರಣದಿಂದ ಇವನ್ನು ನಿವಾರಿಸಬಹುದು.  
ಸೂಡೌಲಕ್ಯಾಪ್ಸಿಸ ಎಂಬ ಹುರುಪೆಕೀಟ, ಲೈಗೀಯಸ್ ಎಂಬ ಸಸ್ಯ ತಿಗಣೆ, ಹಲವು ತೆರನ ಕಾಂಡಕೊರಕಗಳೂ ಪೀಚನ್ನು ಪೀಡಿಸುವುವು.  
ಕುಯಿಲು ಮತ್ತು ಇಳುವರಿ: ಪೀಚ್ ಮರದ ಕುಯಿಲಿನ ಕಾಲ ಮೇ-ಸೆಪ್ಟಂಬರ್.  ನೀಲಗಿರಿ ಬೆಟ್ಟಗಳಲ್ಲಿ ಮೇಯಿಂದ ಜೂನ್ ಪೀಚ್ ಫಲಗಳು ಇಳಿಸಿದ ಮೇಲೂ ಮಾಗುವುದರಿಂದ ಇದನ್ನು ಸಾಮಾನ್ಯವಾಗಿ ಅರೆಪಕ್ವವಾಗಿ ಗಟ್ಟಿಯಾಗಿರುವಾಗಲೇ ಮರದಿಂದ ಇಳಿಸಲಾಗುತ್ತದೆ.  ಪೀಚ್ ಮರಗಳು ಸುಮಾರು 15-20 ವರ್ಷಗಳ ಕಾಲ ಲಾಭದಾಯಕವಾಗಿ ಫಲ ಕೊಡುವುವು.  ಇಳುವರಿ ಭಾರತದಲ್ಲಿ ಮರವೊಂದಕ್ಕೆ 40-80 ಕೆ.ಜಿ.
ರಾಸಾಯನಿಕ ಸಂಯೋಜನೆ ಹಾಗೂ ಬಳಕೆ : ಪೀಚ್ ಹಣ್ಣುಗಳು ಕೆಲವು ತೆರೆನ ಶರ್ಕರಗಳ ತಯಾಮಿನ್ ಮತ್ತು ಆಮ್ಕಾರ್ಬಿಕ್ ಆಮ್ಲಗಳ ಉತ್ತಮ ಆಕರ ಎನಿಸಿದೆ.  ಕೆಲವು ಬಗೆಗಳಲ್ಲಿ ಎ ವಿಟಮಿನ್ ಗಮನಾರ್ಹ ಮೊತ್ತದಲ್ಲಿದೆ.  ಹಣ್ಣುಗಳು ಮೆಚ್ಚಿನ ಖಾದ್ಯಗಳೆನಿಸಿವೆ.   ಕೆಲವು ಬಗೆಯ ಪೀಚ್ ಹಣ್ಣುಗಳನ್ನು ಸಕ್ಕರೆ ಪಾಕದಲ್ಲಿ ಬೇಯಿಸಿ ಬೀಜ ತೆಗೆದು ಡಬ್ಬಿಗಳಲ್ಲಿ ಸಂಗ್ರಹಿಸಿ ಅನಂತರ ತಿನ್ನುವುದೂ ಉಂಟು.  ಪಾನೀಯ, ಮಧುರಸ ಇಲ್ಲವೇ ಬ್ರಾಂಡಿಯನ್ನು ತಯಾರಿಸುವುದೂ ಇದೆ.  ಅಲ್ಲದೆ ಕೆಲವು ಬಗೆಯ ಪೀಚ್ ಹಣ್ಣುಗಳನ್ನು ಕತ್ತರಿಸಿ ಬೀಜ ತೆಗೆದು ಗಂಧಕದ ಅನಿಲಕ್ಕೆ ಒಡ್ಡಿ, ಬಿಸಿಲಿನಲ್ಲಿ ಒಣಗಿಸಿ ತರುವಾಯ ಬಳಸುವುದಿದೆ.
ಬೀಜದ ಒಳಗಿನ ಪೊಪ್ಪಿನಿಂದ ಒಂದು ರೀತಿಯ ಎಣ್ಣೆಯನ್ನೂ ಕಹಿಬಾದಾಮಿ ಚಂಚಲ ತೈಲವನ್ನೂ ಪಡೆಯಲಾಗುತ್ತದೆ.
ಪೀಚ್ ಹಣ್ಣುಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.  ಆದರೆ 1967 ರಿಂದೀಚಿಗೆ ಆಮದು ಹೆಚ್ಚು ಕಡಿಮೆ ನಿಂತಿದೆ.
(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ